ಶೇಕ್ಕಿಳಾರ್
	ಸು. 12ನೆಯ ಶತಮಾನ. ತಮಿಳಿನ ಪೆರಿಯಪುರಾಣದ ಕರ್ತೃ. ಮದರಾಸಿನ ಸಮೀಪದ ಕುನ್ರತ್ತೂರಿನವನೆಂದೂ ಎರಡನೆಯ ಕುಲೋತ್ತುಂಗ ಚೋಳನಲ್ಲಿ (1133-50) ಕೆಲಕಾಲ ಪ್ರಧಾನಿಯಾಗಿದ್ದ ನೆಂದೂ ತಿಳಿದುಬರುತ್ತದೆ. ಪೆರಿಯಪುರಾಣದ ನಿಜವಾದ ಹೆಸರು ತಿರುತ್ತೊಣ್ಡರ್ ಪುರಾಣಮ್ (ಶ್ರೀಭಕ್ತರ ಪುರಾಣ) ಎಂದು ತಿಳಿದುಬರುತ್ತದೆ. ಶೇಕ್ಕಿಳಾರ್ ಎಂಬುದು ಕವಿಯ ನಿಜವಾದ ಹೆಸರಲ್ಲ. ಅದು ಇವನ ವಂಶದ ಹೆಸರು. ಈತನ ನಿಜನಾಮ ಅರುಣ್ಮೊಳಿತ್ತೇವರ್. ಕವಿ ಈ ಪುರಾಣವನ್ನು ರಚಿಸಿ ಶೇಕ್ಕಿಳಾರ್ ವಂಶಕ್ಕೆ ಅಪಾರ ಗೌರವ ತಂದದ್ದರಿಂದ ವಂಶದ ಹೆಸರೇ ಕವಿಯ ಹೆಸರಾಗಿ ಉಳಿಯಿತೆಂದು ತಿಳಿದುಬರುತ್ತದೆ.

	ಆ ಕಾಲದಲ್ಲಿ ಜೈನ ಪ್ರಬಲಿಸಿದ್ದುದರಿಂದ ಶೈವನಾದ ರಾಜ ಕುಲೋತ್ತುಂಗ ಚೋಳ ಜೈನ ಜೀವಕ ಚಿಂತಾಮಣಿಯನ್ನು ಮೆಚ್ಚಿ ಆ ಕಥಾಲಾಪದಲ್ಲೇ ವಿಶೇಷ ಆಸಕ್ತಿ ತಳೆದಿದ್ದುದನ್ನು ನೋಡಿ ಮಂತ್ರಿ ಶೇಕ್ಕಿಳಾರ್ ರಾಜನಿಗೆ ಶೈವಮತದ ಮಹಿಮೆಯನ್ನು ತಿಳಿಯ ಹೇಳಿ ತಿರುತ್ತೊಣ್ಡತ್ತೊಗೈ ತಿರುವಂದಾದಿಗಳಲ್ಲಿಯ ಶಿವಭಕ್ತರ ದಿವ್ಯ ಚರಿತ್ರೆಗಳನ್ನು ವಿವರಿಸಿದನಂತೆ. ಅವನ್ನು ಕೇಳಿದ ರಾಜ ತೃಪ್ತನಾಗಿ ಆ ಮಹಾಮಹಿಮರ ಚರಿತ್ರೆಗಳನ್ನು ಪ್ರೌಢಕಾವ್ಯ ರೂಪದಲ್ಲಿ ರಚಿಸಬೇಕೆಂದು ಕೇಳಿಕೊಳ್ಳಲಾಗಿ ಶೇಕ್ಕಿಳಾರ್ ಮಂತ್ರಿಪದವಿ ತೊರೆದು ಚಿದಂಬರ ಕ್ಷೇತ್ರದಲ್ಲಿ ನೆಲಸಿ ಶಿವಾನುಗ್ರಹ ಪಡೆದು ಪುರಾಣ ರಚನೆ ಮಾಡಿದನೆಂದು ಹೇಳಲಾಗಿದೆ.

	ಪೆರಿಯ ಪುರಾಣದಲ್ಲಿ ಅರುವತ್ತುಮೂರು ಮಂದಿ ಪುರಾತನ ಶಿವಭಕ್ತರ ಕಥೆಗಳಿವೆ. ಕನ್ನಡ ಸಾಹಿತ್ಯದ ಮೇಲೆ ಈ ಗ್ರಂಥದ ಪ್ರಭಾವ ಅಪಾರವಾಗಿ ಆಗಿದೆ. ಉಪಮನ್ಯು ಮುನಿ ಮತ್ತು ಬಸವಪ್ಪಶಾಸ್ತ್ರೀಗಳು ಇದನ್ನು ಸಂಸ್ಕøತಕ್ಕೆ ಭಾಷಾಂತರಿಸಿದ್ದಾರೆ. ಹಂಪೆಯ ಹರೀಶ್ವರ, ನಿಜಗುಣ ಶಿವಯೋಗಿ, ಕವಿಸುರಂಗ ಮೊದಲಾದವರು ಈ ಕೃತಿಯನ್ನು ಕನ್ನಡದಲ್ಲಿ ಬರೆದಿದ್ದಾರೆ. ಕನ್ನಡ ಗದ್ಯರೂಪದಲ್ಲಿಯೂ ಈ ಗ್ರಂಥ ಭಾಷಾಂತರ ಗೊಂಡಿದೆ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣ, ಪಂಡಿತಾರಾಧ್ಯ ಚರಿತ್ರೆಗಳಲ್ಲಿ ಇಲ್ಲಿಯ ಕಥೆಗಳು ಬಂದಿವೆ.	
			
					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ